ಉತ್ತರ ಭಾರತದಲ್ಲಿ ಹಿಮಾಲಯ ಶ್ರೇಣಿಗಳ ತಪ್ಪಲಿನಲ್ಲಿ ವಾಸಿಸುತ್ತಿದ್ದ ಕೆಳವರ್ಗದ ಒಂದು ಕ್ಷತ್ರಿಯ ವಂಶ. ಇದು ಅಂದಿನ ರಾಜಕೀಯದಲ್ಲಿ ಒಂದು ಗಣಪದವನ್ನು ಹೊಂದಿತ್ತು.

ಎಂಟು ಅಥವಾ ಒಂಬತ್ತು ಬಣಗಳು ಸೇರಿದ್ದ ವೈಜಿ (ವಜ್ಜಿ) ಒಕ್ಕೂಟದಲ್ಲಿ ವಿದೇಹರು, ಲಿಚ್ಛವಿಗಳೂ ಜ್ಞಾತೃಕರು ಹಾಗೂ ವಜ್ಜಿಗಳು ಬಹು ಪ್ರಮುಖರಾಗಿದ್ದರು. ವೈಶಾಲಿ ಲಿಚ್ಚವಿಗಳ ರಾಜಧಾನಿ ಆಗಿತ್ತಲ್ಲದೆ, ಪ್ರಬಲ ವಜ್ಜಿಗಳ ಒಕ್ಕೂಟದ ಕೇಂದ್ರವೂ ಆಗಿತ್ತು. ರಾಮಾಯಣದಲ್ಲಿ ಇದನ್ನು ವಿಶಾಲ ಎಂದು ಹೇಳಲಾಗಿದೆ. ಆಗ ಇದೊಂದು ಶ್ರೇಷ್ಠಪಟ್ಟಣ (ಉತ್ತಮಪುರ) ಆಗಿತ್ತು. ಇಂದಿನ ಬಸರ್ಹ ಊರೇ ವೈಶಾಲಿ ಎಂದು ಗುರುತಿಸಲಾಗುತ್ತಿದೆ. ಇದು ಮುಜಫರಪುರ ಜಿಲ್ಲೆಯಲ್ಲಿದೆ. ಜೈನ ಧರ್ಮದ ಪ್ರಸಾರಕ, 24ನೆಯ ತೀರ್ಥಂಕರ ಮಹಾವೀರ ಹಾಗೂ ಬೌದ್ಧಧರ್ಮದ ಪ್ರವರ್ತಕ ಬುದ್ಧ ಮತ್ತು ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ ಇವರು ಲಿಚ್ಛವಿ ರಾಣಿಯರಲ್ಲಿ ಜನ್ಮ ಪಡೆದಿದ್ದರು ಎಂಬುದು ಒಂದು ಗಮನಾರ್ಹ ಅಂಶ. ಲಿಚ್ಛವಿಗಳದು ಒಂದು ಸೀಮಿತ ಸದಸ್ಯರ ಸಮುದಾಯದ ಸರ್ಕಾರ. ಇವರು ಆಗಾಗ ಸಭೆಗಳನ್ನು ಸೇರಿ ಆಡಳಿತವನ್ನು ಸದಸ್ಯರ ಮುಖಾಂತರ ನಡೆಸುತ್ತಿದ್ದರು. ಸದ್ಯ ತಿಳಿದಮಟ್ಟಿಗೆ ಲಿಚ್ಛವಿಗಳಲ್ಲಿ ‘ಚೇಟಕ’ ರಾಜನೇ ಪ್ರಸಿದ್ಧನಾದವನು. ಇವನಿಗೆ ಹಲವು ಮಂದಿ ಕನ್ಯೆಯರಿದ್ದರು. ಅವರಲ್ಲಿ ಚೇಲ್ಲನಾ (ಚೇಳಿನಿ) ಎಂಬವಳನ್ನು ಮಗಧ ಸಾಮ್ರಾಜ್ಯದ ದೊರೆ ಬಿಂಬಿಸಾರ ಅಥವಾ ಶ್ರೇಣಿಕನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಬಿಂಬಿಸಾರನ ಮರಣಾ ನಂತರ ಆತನ ಪುತ್ರ ಅಜಾತಶತ್ರು ಪಟ್ಟಕ್ಕೆ ಬಂದ. ಇವನಿಗೂ ಚೇಟಕನಿಗೂ ತನ್ನ ಮಲತಮ್ಮಂದಿರಾದ ಹಲ್ಲ ಮತ್ತು ವೇಹಲ್ಲರ ಸಂಬಂಧದಲ್ಲಿ ಘನಘೋರ ಯುದ್ಧವಾಗಿ ಚೇಟಕ ಸೋತ. ಲಿಚ್ಛವಿ ಅಧಿಕಾರಿಗಳಲ್ಲಿ ಕೆಲವು ಅಜಾತಶತ್ರುವಿನ ಪಕ್ಷಕ್ಕೆ ಹೋದರು. ಲಿಚ್ಛವಿಗಳಲ್ಲಿ ಒಡಕು ಉಂಟಾದದ್ದರಿಂದ ಲಿಚ್ಛವಿ ರಾಜ್ಯದ ಪ್ರದೇಶಗಳು-ಸೀಮಾರೇಖೆಗಳು-ಮಗಧ ಸಾಮ್ರಾಜ್ಯದ ಅಧೀನ ಕ್ಕೊಳಗಾದವು. ಅಲ್ಲಿಂದ ಮುಂದೆ ಸ್ವತಂತ್ರ ಗಣರಾಜ್ಯವಾಗಿದ್ದ ಲಿಚ್ಛವಿ ರಾಜ್ಯ ಸಾಮಂತ ಮನೆತನವಾಗಿ ಮುಂದುವರಿದು ಬಲಹೀನ ರಾಜ್ಯವಾಗಿ ಬಾಳಿತೆಂದು ತೋರುತ್ತದೆ. ಗುಪ್ತರು ಪ್ರಾಬಲ್ಯ ಬರುವವರೆಗೂ, ಲಿಚ್ಛವಿ ರಾಜ್ಯದ ಹೆಸರು ಅಷ್ಟಾಗಿ ಕೇಳಿ ಬರುವುದಿಲ್ಲ. ಸಮುದ್ರಗುಪ್ತನ ತಾಯಿ ಲಿಚ್ಛವಿ ವಂಶದವಳೆಂದು ಲಿಚ್ಛವಿ ದೌಹಿತ್ರ ಎಂಬ ಅವನ ಬಿರುದಿನಿಂದ ಅಭಿವ್ಯಕ್ತವಾಗುತ್ತದೆ. ಇವನ ತಾಯಿ ಕುಮಾರದೇವಿ ಲಿಚ್ಛವಿ ರಾಜಕುಮಾರಿ. ಗುಪ್ತರ ಕೆಲವು ನಾಣ್ಯಗಳ ಮೇಲೆ ಮುಂಬದಿಯಲ್ಲಿಯ ಆಲೇಖ “ಚಂದ್ರಗುಪ್ತ-ಶ್ರೀಕುಮಾರದೇವೀ” ಎಂದಿದ್ದರೆ, ಹಿಂಬದಿ ಯಲ್ಲಿ ಸಿಂಹವಾನಹವೇರಿದ ದೇವಿಯನ್ನೂ (ದುರ್ಗಾ) ಮತ್ತು “ಲಿಚ್ಛವಯಃ” ಎಂಬ ಆಲೇಖವನ್ನೂ ಬಿಡಿಸಲಾಗಿದೆ. ಪಾಟಲಿಪುತ್ರವನ್ನು ಕುಮಾರದೇವಿಗೆ ಮದುವೆಯ ಬಳುವಳಿಯಾಗಿ ಕೊಡಲಾಯಿತೆಂದು ಕೆಲವು ಇತಿಹಾಸಕಾರರು ಊಹಿಸುತ್ತಾರೆ. ಆದರೆ ಚೀನೀ ಪ್ರವಾಸಿ ಇತ್ಸಿಂಗನ ಪ್ರಕಾರ ಲಿಚ್ಛವಿಗಳ ರಾಜಧಾನಿ ‘ವೈಶಾಲಿ’ ನಗರವೇ ಮದುವೆಯ ಬಳುವಳಿ ಆಗಿತ್ತೆಂದು ತಿಳಿದುಬರುತ್ತದೆ. ಗುಪ್ತರು ಲಿಚ್ಛವಿ ರಾಜ್ಯದ ಒಡೆಯರಾದರೆನ್ನುವುದರಲ್ಲಿ ಸಂದೇಹವಿಲ್ಲ. ಚೀನದ ಯಾತ್ರಿಕ ಯುವಾನ್‍ಚಾಂಗನ ದಾಖಲೆಗಳಿಂದ ಈ ಪ್ರದೇಶವನ್ನು ಲಿಚ್ಛವಿ ರಾಜ ಶಿವದೇವ ಎಂಬಾತ ಆಳುತ್ತಿದ್ದನೆಂದು ತಿಳಿದುಬರುತ್ತದೆ. ಇವನ ಮಂತ್ರಿ ಅಂಶವರ್ಮನ್ ಠಾಕೂರ್ ಎಂಬಾತ ರಾಜನನ್ನು ಬದಿಗೊತ್ತಿ ತಾನೇ ಸು. 40 ವರ್ಷ ರಾಜ್ಯವಾಳಿದನೆಂದೂ ತಿಳಿದುಬರುತ್ತದೆ. ಸು.650-879ರ ಮಧ್ಯದಲ್ಲಿ ಲಿಚ್ಛವಿಗಳು ನೇಪಾಳ ದೇಶವನ್ನೂ ಆಳಿದರೆಂದು ತಿಳಿದುಬರುತ್ತದೆ. ಇವರ ಶೃಂಖಲಾಬದ್ಧ ಇತಿಹಾಸ ಸರಿಯಾಗಿ ದೊರೆಯದು.
	
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ